Thursday 31 May 2012

ಈ ಹರೆಯದಲಿ ಎಲ್ಲವು ಟ.ಟ.ಟ.!!!


ಮನವೆಂಬ ಮರ್ಕಟ
ಮಾಡುತಿದೆ ಹುಡುಗಾಟ,
ಹದೆಯದ ದಿನದಲ್ಲಿ
ನೀಡುತಿದೆ ತಿಕಲಾಟ ;
ಪಡೆಯುವ ತವಕದಲಿ
ಮಾಡುತಿದೆ ಹುಡುಕಾಟ,
ದೊರೆಯದೆ ಹೋದಾಗ
ಪಡುತಿದೆ ತೊಳಲಾಟ ;
ಕಣ್ಣ ಮುಂದೆ ಬಂದಾಗ
ಕಣ್ಣುಗಳು ಪಟ ಪಟ ;
ಕುಡಿನೋಟ ಬಿರಿದಾಗ
ಈ ಜೀವವೇ ತಟ ಪಟ
ಇದೆಂತ ಅನುಭವ
ಹೇಳಲಾಗದು ದಿಟ,
ಹೇಳದೆ ಕುಳಿತರೆ
ಸೇರಬೇಕು ಮಠ....!!!
ಇನ್ನೂ ಇದೆ ನೋಡಿ ತುಂಬಾ ಟ.. ಗಳ ಕಾಟ..
ಹೇಳುವೆ ಇನ್ನೊಮ್ಮೆ ಈಗ ಹೇಳುವ ಟಾಟಾ..

Wednesday 30 May 2012

ಗೆಳೆತನ

                                  ಮನವರಿತು, ಮನದ ಭಾವನರಿತು,
                                  ಪವಮಾನದಿ ಅವರವರ ನೋವನರಿತು 
                                  ಕಡೆಗಾಲವೆಂದಿರದೆ ನಡೆದಾಡಿ ಕೂಡಿ
                                  ಬಾಡದೇ ಬಳುವ ಭಾವವೇ ಗೆಳೆತನ !

                                 ಭಾನೆತ್ತರಕೇರಿ ದಿಗಂತದೆತ್ತೆಡೆಗೆ ಜಾರಿ 
                                 ಮಿರಮಿರ ಮಿನುಗೋ ಚುಕ್ಕಿಗಳ ಮೀರಿ
                                 ಬೆಳೆಯಿದ್ದು, ಬೆಲೆಕಟ್ಟಲಾಗದೆ ಬೆಲೆಬಾಳುವ 
                                 ಶುಭ್ರಸ್ನೇಹಕ್ಕೆಲ್ಲಿದೆ ಹೇಳಿ ಹಗೆತನ ?

                                 ತುಂಬಿರಲು ನಮ್ಮಲ್ಲಿ ಹೊಂದುವ ಅರಿವು
                                 ಬರದು ಎಂದೆಂದೂ ಅಗಲಿಕೆಯ ನೋವು;
                                 ಹೆಣ್ಣಿರಲಿ ಗಂಡಿರಲಿ ಸ್ನೇಹ ಮೂಡುದು ಸತ್ಯ 
                                 ನಡೆಯಲಿ ತಡೆಯಿರದೆ ಸ್ನೇಹಪರ್ವ ನಿತ್ಯ ನಿತ್ಯ.!!

Tuesday 29 May 2012

ಅಂತರಂಗದ ಅಂತರ











ಮುಸ್ಸಂಜೆಯ ಹೊತ್ತಲ್ಲಿ ಮಬ್ಬಾದ ಬದುಕು
ಮತ್ತದೇ ಹಳೆಯ ನೆನಪುಗಳ ಗೋಪುರ
ಸವಿಯಾದ ಸವಿಯುಣ್ಣದ ನೊಂದ ಮನ ಒಂದೆಡೆ
ಸುಖವಿದ್ದರೂ ನೆಮ್ಮದಿ ಕಾಣದ ಜೀವ ಇನ್ನೊಂದೆಡೆ 

ಮೆಲುಕು ಬೇಡವೆಂದರೂ ಮರಳಿ ಕಾಡುವ ನೆನಪುಗಳು 
ಅಲೆಗಳಂತೆ ಒಂದೊಂದರಂತೆ ಮೇಲೆರಗಿ ಕಾಡುತಿರಲು 
ಕುಳಿತು ದಣಿವಾರಿಸುವಂತೆ ಗತವಿಷಯ ಮೆಲುಕುಹಾಕಿ
ನಡೆಯುತಿರಲು ಅಂತರಂಗದ ಅಂತರದ ತುಲನೆ ..!

ನಡೆದಾಡಿ ಕಲ್ಲುಮುಳ್ಳುಗಳ ಕಡಿದಾದ ದಾರಿಯಲಿ
ಬಳಲಿ ಬೆಂಡಾಗಿ ನರಳುತಿರುವ ಬಡಜೀವ ನನ್ನದು;
ಅರಸೊತ್ತಿಗೆ ಸುಖದಿಂದ ಗತಕಾಲದಲ್ಲಿ ಮೆರೆದು
ಅರಸನಂತಿದ್ದರೂ ನೆಮ್ಮದಿ ಕಾಣದ ಜೀವ ನನ್ನದು..!

ಸುಖವಿಲ್ಲದಿರೂ ನೆಮ್ಮದಿಯಿತ್ತೆನಗೆ ಇದ್ದುದನೇ ತಿಂದು 
ಸುಖನಿದ್ರೆ ಬಿದ್ದು ನಾಳೆಗೆ ನಾಳೆನೇ ಉತ್ತರ ಎನ್ನದಾಗಿತ್ತು !
ತಿಂದುಂಡು ತೇಗಿ, ರಾಜನಂತೆ ಬೀಗಿ ಬದುಕಿದರೂ
ಕೊನೆಗಳಿಗೆ ನಿರ್ಗತಿಗನಾಗಿ ವೃದ್ದಾಶ್ರಮವೆ ಎನಗಾಯಿತು !

ಸೂರ್ಯಸ್ತದಲಿದೆ ನಾಳೆಯ ಹೊಸತನದ ಬಯಕೆ 
ನಮಗೆಲ್ಲಿದೆ ನಾಳೆಯ ಹೊಸತನ ಉಗಮದ ನಂಬಿಕೆ
ಇಬ್ಬರದೂ ಒಂದೆ ಚಿಂತೆ; ಗತಜೀವನದ ವ್ಯಥೆಯ ಕತೆ
ಉಳಿದುದೊಂದೇ ನಮಗೆ- ನಡೆದುದೆಲ್ಲವನೂ ಮರೆತು
ಸೂರ್ಯಸ್ತದಲಿ ಬೆರೆಯುವಾಸೆ..!!

Monday 28 May 2012

ನನ್ನವಳ ಹುಡುಕಾಟ


ಎಲ್ಲಿರುವಳೋ ನನ್ನವಳು
ಹುಡುಕಿ ಸೊರಗಿಹವು ನನ್ನ ಕಣ್ಣಗಳು;
ಗರಿಗೆದರಿ ಹಾರಿ, ಬಾನೆತ್ತರಕೇರಿ
ಮುಚ್ಚಿಕೊಳ್ಳದೆ ಮಿಟುಕುತ್ತಿವೆ ಕಣ್ಣ ರೆಪ್ಪೆಗಳು

ಹಲವಾರು ಮನಕದವ ತಟ್ಟಿದರೂ
ಕೆಲವಾರು ತೆರೆಯಲೇ ಇಲ್ಲ;
ಕೆಲವೊಮ್ಮೆ ತೆರೆದುಕೊಂಡರೂ
ಮನಭಾವನೆಗೆ ಸ್ಪಂದಿಸಲಿಲ್ಲ !

ಬಾಗಿಲಲೇ ನಿಂದಿರಿಸಿ ಕಳುಸಿದವು
ಒಳಗೆ ಬರಮಾಡಿಕೊಳ್ಳಲಿಲ್ಲ ಕೆಲವು;
ಹುಮ್ಮಸ್ಸಿನೋಳು ಒಳನಡೆದರೂ
ಕುಳ್ಳಿರಿಸಿ ಉಪಚರಿಸಲಿಲ್ಲ ಹಲವು !

ಪ್ರೀತಿಯ ಹುಡುಕಾಟ ವ್ಯಾಪಾರವಾಗಿ
ಮನ ಹರಡಿದೆ ವಿಶ್ವ ವ್ಯಾಪಕವಾಗಿ
ಹುಡುಕಿ ಕೊಡಬಲ್ಲಿರೋ ಎನಗೊಂದು
ಮುದ್ದನೆಯ ಮನವಿರುವ ಪ್ರೀತಿಬಂಧು ?!

ನೆರಳ ನೆರವು



ವಿಸ್ತಾರವಾದ ಬಯಲು
ಭಾರವಾದ ಹೆಜ್ಜೆ
ಸಾಗದಷ್ಟು ದೂರ ದಾರಿ
ಸುತ್ತಲಿನ ಚಿತ್ರಣ ಸ್ಪಷ್ಟ ಎನಿಸಿದರೂ ಅಸ್ಪಷ್ಟ..!
ನುಲಿದು ಸಾಗುವ ಜೀವಕೆ
ಕಲಿಸೋ ಛಾಯೆಯ ಮಾರ್ಗದರ್ಶನ ;
ಒಮ್ಮೊಮ್ಮೆ ಸಣ್ಣ, ಮತ್ತೊಮ್ಮೆ ಬೃಹದಾಕಾರ
ಆರಕ್ಕೆರದಂತೆ, ಮೂರಕ್ಕಿಲಿಯದಂತೆ
ಅಡಿಗಡಿಗೆ ಭಯ ಹುಟ್ಟಿಸುತ್ತಿರುವುದು..!


ಸಂಭ್ರಮದ ಮೆರೆವಣಿಗೆ ಮುಗಿದು
ಮೌನ ಮೆರವಣಿಗೆ ಸಾಗುವವರೆಗೆ
ಜೊತೆ-ಜೊತೆಯಲಿ ಬೆಂಬಿಡದ
ಚಲನ-ವಲನದ ಪ್ರತಿಬಿಂಬ;
ಅತ್ತರೆ ಅತ್ತು, ನಕ್ಕರೆ ನಕ್ಕು
                   ಕೀಲಿ ಕೊಡುವ ಬದುಕ ಗಡಿಯಾರ !!

Saturday 19 May 2012

ಗಣೇಶ ಸ್ತುತಿ





ಗಜಮುಖದವನೇ ಹೇರಂಬಾ..
ನಿನ್ನಿಂದೆಲ್ಲವೂ ಪ್ರಾರಂಭ ..| ಪ  |
ಮೊದಲಿಗೆ ವಂದಿಪೆ ಹೇ ಗಣಪ 
ಪ್ರೇಮದಿ ಕಾಯೋ ನೀ ಬೆನಕ | ಅ.ಪ. |

ರಾವಣ ದರ್ಪವ ಮುರಿದವನೇ 
ಚಾಮರ ಕರ್ಣನೆ ಹರಸುತನೆ 
ಮೋದದಿ ಭಜಿಪೆನು ಹೇ ಗಣಪ
ಪಾಪವ ನೀಗಿಸು ನೀ ಬೆನಕ | ೧ |

ಮುನಿಗಳ ಮನದಲಿ ನೆನೆವವನೆ
ಭಕುತರ ಹೃದಯದಿ ನಲಿವವನೆ
ಕುಣಿಯುತ ಸ್ತುತಿಪೇನು ಹೇ ಗಣಪ
ಸನ್ಮತಿ ಕರುಣಿಸೋ ನೀ ಬೆನಕ | ೨ |

ಭಕುತಿಲಿ ಪೂಜಿಪೆ ನಾ ನಿನ್ನಾ
ದುರಿತವ ನೀಗಿಸೋ ನೀ ಎನ್ನಾ
ಸಕಲರ ಪೊರೆಯೋ ಹೇ ಗಣಪ
ಅಭಯವ ನೀಡೋ ನೀ ಬೆನಕ | ೩ |