Saturday 25 August 2012

ಬರಗಾಲದ ಬೇಗೆಯಲಿ

ಬರಗಾಲವೀಗ.. 
ಎನ್ನರಗಿಣಿಯ ಎದೆಗೂಡು 
ಬರಿದಾದ ಬಯಲು..!
ಒಲವ ನೀರನೆರಚಿ
ಅವಳ ಮನ ತಣ್ಣಗಿಡಲೆಂದು 
ಮೋಡವಾಗಿ ಬಾನನೇರಿದರೂ
ಮತ್ತೆ ಗುಡುಗುಗಳ ಅಬ್ಬರಕ್ಕೆ
ಬಲವಾದ ಗಾಳಿ ಬಂದು
ಮೋಡಗಳ ದಿಕ್ಕು ಬದಲಿಗೊಂಡು
ಸುರಿಯ ಬೇಕಿದ್ದ ಸೋನೆ 

ಸುರಿದು ತಂಪು ಮಾಡಲಿಲ್ಲ..!!
ಬರಗಾಲವೀಗ.. 
ಎನ್ನರಗಿಣಿಯ ಎದೆಗೂಡು 
ಬರಿದಾದ ಬಯಲು..!!
ಸುಡುನೆಲವ ಉತ್ತಿ 
ಪಡೆವೆ ಪ್ರೀತಿಯ ಫಸಲು
ಬಿಡದೆ ನಡೆವೆ ಅವಳೆಡೆಗೆಂದು 
ನಡುನಡುಗಿ ನಡೆದರೂ
ಬಿಡಲಿಲ್ಲ ಅವಳ ಗಮನ ನನ್ನ ಕಡೆ
ಕಡುಕೋಪ ಬಿಡುವೆಂದು 
ಕೊಡು ನೀ ನಿನ್ನೊಲುಮೆ 
ಪಡೆದಿಡುವೆ ಕಡೆತನಕ 
ಕಡು ಪ್ರೀತಿಯಿಂದ ಕೇಳಿದರೂ 
ಪಡೆಯಲಾಗಲಿಲ್ಲ ಕಡೆಗೂ ಅವಳ ಕೂರ್ಮೆ.
ಬರಗಾಲವೀಗ.. 
ಎನ್ನರಗಿಣಿಯ ಎದೆಗೂಡು 
ಬರಿದಾದ ಬಯಲು..!!
ಮರುಭೂಮಿಯಲ್ಲ ಅವಳ ಒಡಲು
ಕಾದಿರಬಹುದು ಕೆಲವು ದಿನಗಳವರೆಗೆ
ಕಾಯುವೆನು ಖಂಡಿತ ಆರುವ ತನಕ
ಬೆಂಬಿಡದೆ ಸಾಗುವೆ ಬಿಸಿಲು ಮರೆಯಾಗಿ 
ಸೋನೆ ಹನಿ ಎನ್ನ ಕೆನ್ನೆ ಸವರಿ
ಖುಷಿ ಕೊಡುವ ಕಾತರದಲ್ಲಿ; 
ಬರಗಾಲ ನೀಗಿ ಬೆಳೆ ಬೆಳೆದು
ಬೆರೆತು ಫಸಲು ಕೊಡುವ ತವಕ
ಬರಿದಾದ ಬಯಲು ಹಸುರಾಗುವ ತನಕ !!

Tuesday 14 August 2012

(ಅ)ಸ್ವತಂತ್ರ ಭಾರತ




ದೊರಕಿತೆಮಗೆ ಸ್ವಾತಂತ್ರ್ಯ ಹರುಷಕೆ ಪರಿವಿಲ್ಲ
ಹಲವಾರು ವರುಷಗಳ ಹೋರಾಟಕೆ ಗೆಲುವು;
ಸಾವಿರಾರು ಜೀವಗಳ ಬಲಿದಾನಕೆ ಫಲವು !
ಪರರಿಂದ ಹೊರಬಂದು ಹರುಷದಿಂ ಬೀಗಿದೆವು
ದೊರಕಿದೊಡೆ ನಮಗಂದು ದಾಸ್ಯದಿಂ ಮುಕ್ತಿ;
ಅಹಿಂಸೆ, ಸತ್ಯ, ತ್ಯಾಗದೊಳಗೆ ಸೇರಿಸಿ ಯುಕ್ತಿ !
ಕಳೆದು ಹೋದವು ಅರವತ್ತೆಂಟು ಸಂವತ್ಸರ
ಮರುಕಳಿಸುತ್ತಿದೆ ಮತ್ತಿಲ್ಲಿ ಜನರೊಳಗೆ ಮತ್ಸರ;
ನಾನು ನನ್ನದೆನ್ನುವ ಸ್ವಾರ್ಥ ಬೆಳೆದು ಹೆಮ್ಮರ !
ಅಂದು ದಾಸ್ಯತನದ ಬದುಕು, ಇಲ್ಲದೆ ಸ್ವಚಂದತೆ 
ಇಂದೂ ದಾಸರು ನಾವು, ಉಳ್ಳವರ ಗುಲಾಮರು;
ದೋಚಿಕೊಂಡರು ದೇಶ ಸ್ವಾರ್ಥಕೆ ಖದೀಮರು !
ಭಯದ ಗೂಡೊಳಗೆ ನಾವು ನಡೆತಂದು ಜೀವನವ 
ಕಳೆದುಕೊಂಡಂತೆ ದೊರೆತ ಸ್ವಾತಂತ್ರ್ಯದ ಹೊಸಬಾಳು;
ಮರಕಲಿಸಿದಂತೆ ಪೂರ್ವದ ಅಡಿಯಾಳ ಕರಿಬಾಳು!
ಕೆಚ್ಚೆದೆಯ ಕಲಿಗಳೇ ಎಚ್ಚೆತ್ತು ಭ್ರಷ್ಟಚಾರಕೆ ಕಿಚ್ಚಚ್ಚಿ 
ಮುಂದೆ ನಡೆಯುವುದರ ಅರಿತು ಯುಕ್ತ ಹೆಜ್ಜೆಹಾಕಿ ;
ಮತ್ತೊಮ್ಮೆ ಕಳೆದುಕೊಳ್ಳುವ ಮುನ್ನ; ದೇಶದ ಉಳಿವಿಗಾಗಿ !!

Wednesday 1 August 2012

ರಕ್ಷಾ ಬಂಧನ




ಬಂಧನ.. ಜೀವ ಬಂಧನ, ಭಾವ ಬಂಧನ..
ಪ್ರೀತಿ ಪ್ರೇಮದಿ ಬೆರೆವ ಅನುರಾಗ ಬಂಧನ,
ನೋವು ನಲಿವೆಗೆ ಸ್ಪಂದಿಸೋ ಸ್ನೇಹ ಬಂಧನ 
ಅದೆಷ್ಟೋ ಭಾವಗಳ ಮೀರಿ ಮೆರೆದು ನಿಂದವು
ಅಣ್ಣ-ತಂಗಿಯರ ಅಕ್ಕರೆಯ ಸೋದರ ಬಂಧನ.!
ಬೆಸೆದ ಮನ ಒಮ್ಮೊಮ್ಮೆ ಬಸವಳಿಯಬಹುದು..
ಹೆಸೆದ ಬದುಕೂ ಕೆಲವೊಮ್ಮೆ ಮುಸುಕಾಗಬಹುದು,
ಕುಸಲತೆ ಕೇಳುವ ಗೆಣೆಯ ಪಕ್ಕ ಸರಿಯಬಹುದು..
ವಿಷವಿರದ ನೆತ್ತರ ಸಂಬಂಧವದು ಬೆಸೆದಿರಲು 
ಮಿಸುಕದೆ ಹೆಣೆದಿರಲು, ವಿಂಗಡಿಸಲಾಗದು !!
ಬಾಹು ಬಂಧನ.. ಅವರವರ ಭಾವ ಸಂವೇದನ 
ಸ್ನೇಹವೋ, ಪ್ರೀತಿಯೋ.. ವಿಚಾರವಲ್ಲಿ ಗೌನ..!
ರಕ್ಷಾ ಬಂಧನ.. ಸ್ವಚ್ಛ ಮನ ಪರಿಶೋಧನ ..
ಸೋದರತೆಯ ಅಮೂಲ್ಯ ಭಾವ ಅನಾವರಣ
ರಕ್ಷಣೆಯ ರಕ್ಷಾ ಕಂಕಣ ಭಾತೃ ಧಾರಣ.!