Sunday 11 November 2012

ದೀಪಾವಳಿ

ಸರಣಿ ದೀಪಗಳೊಳಗೆ ಪ್ರಜ್ವಲಿಸೋ
ಕಿರಣಗಳು ಅಳಿಸುತ್ತಿವೆ ಅಂಧಕಾರವ;
ನಗೆ ಬೀರಿ ತೇಲಾಡುವ ಜ್ಯೋತಿಗಳು

ಸಾರುತ್ತಿವೆ ಪಡೆನೀನೆಂದೂ ಹರುಷವ !
ಮೊದಲೊಂದು ದಿನ ಮಡಿ, ತೈಲ ಮಜ್ಜನ
ಹೊಸಯುಡುಗೆಯುಟ್ಟು ಮಿರಮಿರಿಸೋ ದಿನ
ನರಕಾಸುರನಂತಾಗದಿರೆಂದು ಕೃಷ್ಣ ಜಗಕೆ
ಸಾರಿದುದನ್ನ ಮರೆಯದೆ ಮೆರೆವ ಸುದಿನ
ನಡುವಿನದು ಹಬ್ಬ, ಕೆಟ್ಟ ಅಮಾವಾಸ್ಯೆಯಲ್ಲ
ಬಲಿಯ ಬಲಿ ಕೇಳಲಿಲ್ಲ, ಬದಲಾಗಿ ಕಲಿ
ನೀಗಿದ ಹರಿ ಜಗಕೆ ಅರುಹಿದ ಒಲವಿನಲಿ
ತನ್ನರಸಿ ಲಕುಮಿಯ ಪೂಜಿಸಿರೆಂದು ಸಾರಿ
ಮಾರನೆಯ ಮುಂಜಾನೆ ಗೋವು ಆರಾಧನೆ
ಶೃಂಗರಿಸಿ ಪೊಡಮಟ್ಟು, ಮೆರವಣಿಗೆ ಮಾಡಿ;
ಬಲೀಂದ್ರನ ಕರೆದು, ಸ್ಮರಿಸಿ ಭಕ್ತಿಯೊಳು
ಹೊಸತನದಿ ಮೆರೆವ ಸಂಭ್ರಮದ ದಿವಸ !
ಮೂರುದಿನಗಳ ಮಜ್ಜನ ನೀಗುವುದು
ಕಳೆದ ಮುನ್ನೂರು ದಿನಗಳ ಕೊಳೆತನ;
ಹರುಷ ಉಕ್ಕಿ ಬರಲೊಂದು ಸಾಕು
ಮನೆಯವರ ಉತ್ಸಾಹ, ಉಲ್ಲಾಸ, ಸ್ಪಂದನ !
ಹಬ್ಬವಿದು ನೂತನ, ಹೊಸತನದ ಸಂಕಲನ
ಕಲೆತು-ಬೆರೆತು ಬಾಳೆಂದು ಸದಾ ಸಾರುತ್ತಿರುವ
ತಮವನಳಿಸಿ ಸುಜ್ಞಾನ ದೀವಿಗೆ ಬೆಳೆಸುವ
ದೀಪಗಳು ಸಾಲು ಸಾಲಿನಲ್ಲಿ ನಗುವ ದೀಪಾವಳಿ !!