Saturday, 11 February 2017

ಸಂಗಾತಿ-ಸವತಿ



ಮಗ್ಗುಲಲೇ ಬಂದು ಮಲಗುವ
ಕವಿತಾ ಪದಗಳಿಗೆ
ಬೆಚ್ಚನೆಯ ಹೊದಿಕೆ ಹೊದ್ದು
ಬಳಿಯಲ್ಲಿಯೇ ಮಲಗಿಸಿಕೊಳ್ಳುವೆ
ಮುಂಜಾನೆಯ ಬಿಸಿ ಕಾಫಿ ಕುಡಿಸುವೆ
ಬೆಳಗ್ಗಿನ ನಾಸ್ತ ಕೊಡಿಸುವೆ
ಮತ್ತೆ ಆಫೀಸಿಗೆ ಹೋಗುವಾಗ
ಕಾರಿನೊಳಗೆ ಕೂರಿಸುವೆ
ಕೆಲಸದೊತ್ತಡದ ನಡುವೆಯೂ
ಅದರ ಜೊತೆ ಮಾತಾಡುತ್ತಿರುವೆ
ಮಧ್ಯಾಹ್ನದ ಊಟದಲ್ಲೂ 
ಅದಕ್ಕೆ ಸಮಪಾಲು
ಮುಸ್ಸಂಜೆಗೆ ಮೈಯೊಡ್ಡಿ
ನಿಂತಾಗಲೂ ಜೊತೆಯಲ್ಲಿಯೇ
ಕೂರಿಸಿಕೊಳ್ಳುವೆ
ಅವಳಿಗಂತೂ ವಿಪರೀತ ಹೊಟ್ಟೆ ಕಿಚ್ಚು
ನನಗಿಂತ ಅವಳೇ ಇಷ್ಟ ನಿಮಗೆ
ಹಾಗಾದರೆ ನನ್ನನ್ನೇಕೆ ಕಟ್ಪಿಕೊಂಡಿರಿ
ಅನ್ನುವ ಗೊಣಗು ದಿನಾ ಅವಳದ್ದು
ಅವಳೂ ಬೇಕು, ಇವಳೂ ಬೇಕು
ಇಬ್ಬರೊಂದಿಗೆ ಬಾಳು ನಡೆಸಬೇಕು
ನೀವೇ ಹೇಳಿ ನಾನೇದರೂ ತಪ್ಪುದಾರಿ
ಹಿಡಿದಿದ್ದರೆ ಕೋರ್ಟಿಗೆ ಹಾಕಿ
ಶಿಕ್ಷೆ ಕೊಡಿಸಿ.

ಸಂಬಂಧ

ತಿಳಿದಿದೆಯಾ ನಿನಗೆ
ನಮ್ಮಿಬ್ಬರ ಪ್ರೇಮ ಕಥೆ
ಪ್ರಥಮ ಬಹುಮಾನ ಪಡೆದಿದೆ.
ಖುಷಿಯಾಗುವುದಿಲ್ಲ ನಿನಗೆ
ಗೊತ್ತು ನನಗೆ
ಆದೊಂದು ಸುಳ್ಳಿನ
ಸತ್ಯ ಕಥೆ;
ಓದುಗರು ನಿನ್ನ ಬಗ್ಗೆ
ತಿಳಿದುಕೊಳ್ಳಲು ಹಾತೊರೆಯುತ್ತಿದ್ದಾರೆ
ಏನು ಹೇಳಲಿ ಅವರಿಗೆ ?
ಇದೊಂದು ಕಟ್ಟು ಕಥೆ ಅನ್ನಲೇ
ನಿನ್ನ ನಂಬರು ಕೊಡಲೇ
ಬೇಡಬಿಡು ನಿನಗೇಕೆ
ಸುಮ್ಮನೆ ತೊಂದರೆ
ಆದರೆ ನೆನಪಿಡು
ಮುಂದೊಂದುದಿನ
ರಾಷ್ಟ್ರ ಪ್ರಶಸ್ತಿ ಸಿಕ್ಕಿದರೆ
ನಾ ನಿನ್ನ ಹಸರೇ ಹೇಳುವೆ
ಅಂದಾದರೂ ಬಂದು
ನನ್ನ ಸೇರಲು ಪ್ರಯತ್ನಿಸು
ಕಾಯುತ್ತಿರುತ್ತೇನೆ

Friday, 9 August 2013

ಕಾಲ ಗತಿ



ಕಾಲಚಕ್ರಕ್ಕೊಂದು ಕೀಲಿ ಮಾಡಬೇಕೆಂದಿರುವೆ 
ಕುಂಟದೆ, ಓಡುವ ವೇಗಕ್ಕೊಂದು ಕಡಿವಾಣದಂತೆ 
ಮೊನ್ನೆಯ ಬಾಲ್ಯದ ಮುಗ್ದತೆಯಳಿಸಿ 
ನಿನ್ನೆಯ ಯವ್ವನದ ಮಿಡಿತಗಳ ಮರೆಸಿ 
ವರ್ತಮಾನದ ಜೀವ ಜಾಲದಲಿ ಸಿಕ್ಕಿಸಿ 
ನಾಳೆಯ ಚಿಂತೆಗೆ ಒರೆ ಹಚ್ಚಿಸಿದ..... 
ಮುಂಜಾವಿನ ಇಬ್ಬನಿ ಒಣಗುವ ಮುನ್ನ 
ಮದ್ಯಾಹ್ನದ ಉರಿಬಿಸಿಲ ತಾಕಿಸಿ
ಸಂಜೆ ಬರುವ ಮುನ್ನವೇ ನಿತ್ರಾಣವಾಗಿಸಿ 
ಕಳೆದುದನ್ನ ಮೆಲ್ಲುವಂತೆ ಕುಹಕಿಸಿದ ಈ.... 
ಗತಕಾಲಕೆ ಆಮಂತ್ರಣವಿತ್ತರೂ ಬರಲಿಲ್ಲ 
ಗತಘಟನೆಗಳೆಲ್ಲ ಇತಿಹಾಸವಾಯಿತಲ್ಲಾ !
ಮಿತಿಯಿರಲಿ ಚಲನದಲೆಂದು ರವಿ ಶಶಿಗೆಂದರೂ 
ನಡೆಯುತ್ತಿಹರು ಆ ಕಾಲನನುಮತಿಯಂತೆ.... 

Sunday, 4 August 2013

ಆತ್ಮ ಸ್ನೇಹಿತ




ನನಗರಿತಂತೆ ನನಗಿಹನೊಬ್ಬ 
ಆತ್ಮೀಯ ಗೆಳೆಯ ನನ್ನೊಳಗೆ 
ನನಗರಿವಂತೆ ರವಾನಿಸೆಂದನು 
ಸ್ನೇಹ ಸಂದೇಶವ ನಿಮಗೆಲ್ಲರಿಗೆ !

ಅವನಿಲ್ಲದೆ ನನಗೆಲ್ಲಿದೆ ದ್ಯೈರ್ಯ 
ನಿಮ್ಮೆಲ್ಲರ ಸ್ನೇಹ ಪಡೆಯವ ಸ್ಥೈರ್ಯ 
ಅವನಾಸೆಯಂತೆ ನೀವೆಲ್ಲರೂ 
ಮೆಚ್ಚಿ ಹೆಚ್ಚಿಸಿದಿರಿ ಸ್ನೇಹ ಸೌಂದರ್ಯ !

ಅಚ್ಚಳಿಯದೆ ಉಳಿಯಲೆಮ್ಮ 
ಸಚ್ಚರಿತೆಯ ಶುಭ್ರ ಸ್ನೇಹಹಂದರ 
ಬಿಚ್ಚಿಕೊಳ್ಳದೆ ಹೆಚ್ಚೆಚ್ಚಾಗಲೆಂಬುದೆ
ಎನ್ನ ಮನಸಿನಾಶಯ, ಮಹಾದಾಶಯ !!