Saturday, 23 June 2012

ಹೆತ್ತಬ್ಬೆ

ಸಂಸೃತಿಯೊಳು ಸಿಲುಕಿ ಸಂಸಾರದ
ಸೆಲೆಯೊಳಗಾಡುವ ಪರಿವಿತ್ತಾದೇವನ
ಚಿತ್ತದಂತೆ ಬಸಿರಾದ ಎನ್ನಬ್ಬೆಯ
ಗರ್ಭದೊಳು ಉಸಿರಿತ್ತನೆನಗೆ..
 
ಸುಪ್ತ ಕಾಯ ಸುಸೂತ್ರದಿಂದಿರಲು
ಕ್ಲಪ್ತ ಕಾಲದಾದ್ಯಂತರೊಳಗೂಡಿ
ಕಾಯ್ವಳಾ ಮಮತೆಯ ಮೂರ್ತಿ
ಅನ್ಯ ಜೀವವೆಂದಿನಿಸದೆ ಮುದ್ದಿಸಿ..
 
ಅದೆಂತೂ ತೀರಿಸಲಾಗದೆಮಗೆ
ಅವಳನನ್ಯ ಋಣಭಾರವನು,
ಇರುವುದೊಂದೇ ಮಾರ್ಗವದು
ಅವಳಾದರ್ಶವನುವನು ಎಮ್ಮ
ನಡೆನುಡಿಯೊಳವಡಿಸಿ ಹೆತ್ತಬ್ಬೆಯ  
ಕೀರ್ತಿ ಪಸರಿಸಧಿಲೋಕದೊಳು..!

ಚಿಕ್ಕ ಆತ್ಮ; ದೊಡ್ಡ ತತ್ವ



ಇರುವ ಕಣದಗಲದ
ಉದರ ಪೊರೆಯಲೋಸುಗ
ನಡೆದ ದಾರಿ ನೆನಪಿದೆಯೋ
ಅರಿವಿಲ್ಲ; ನಡೆದದ್ದೇ ದಾರಿ
ಸೇರಿ ಸಾಗಿದರು ದೂರ ದಾರಿ
ಇರುವ ಕಡೆಗೆ ಪಯಣ;

ಗೊತ್ತುಗುರಿವಿಲ್ಲದಿದ್ದರೂ ಸುತ್ತಿ 
ಹೊತ್ತೊತ್ತಿಗೆ ಮೇದು ತಿನ್ನುವರು
ಇದ್ದುದನ ಹಂಚಿ; ನಾವಾತತ್ವವ 
ಅರಿಯದೆ ಅನ್ಯತ ಭಾವ ತುಂಬಿ 
ಕಚ್ಚಾಡಿ ಹೊನ್ನು, ಮಣ್ಣು, ಹೆಣ್ಣಿಗಾಗಿ !

ಬೆಂಬಿಡದೆ ಒಡನಾಡಿಗಳ    
ಬೆಂಬಲಿಸಿ ಜೊತೆನಡೆದು 
ಶಿಸ್ತಿನ ಜೀವನ  ಶೈಲಿಯ
ಅರಿತು ಅಳವಡಿಸಬಾರದೇಕೆ
ಅನ್ನುವ ಗೂಡ ಪ್ರಶ್ನೆ !

ಒಗ್ಗಟ್ಟಿನಲ್ಲಿ ಬಲವಿದೆ;
ಜೊತೆಯಲಿ ನಲುವಿದೆ;
ಅರಿಯಲೊಬ್ಬರನೊಬ್ಬರು
ಕೂಡಿ ಬಾಳಲು ಸುಖವಿದೆ;

Thursday, 14 June 2012

ಪ್ರತ್ಯಕ್ಷ ದೇವತೆ


ಹರಿವ ನೀರಿದ್ದರೂ
ಬೀಸೋ ಗಾಳಿದ್ದರೂ
ಕುಡಿಯೊಡೆಯಲು ಭೂಮಿಯೇ ಬೇಕು ಬೀಜಕೆ !

ದೇವರ ವರವಿದ್ದರೂ
ಹುಟ್ಟಿಸೋ ಪಿತನಿದ್ದರೂ
ಹಡೆಯಲು ತಾಯಿಯೇ ಬೇಕು ಜೀವಕೋಟಿಗೆ !!

ನವಮಾಸ ಹೊತ್ತು, ನವಜೀವ ಇತ್ತು,
ನಡೆದಾಡಿಸಿ, ನಮಗೆ ನುಡಿಯಾಡಿಸಿ
ಕಡೆತನಕ ಜೋತೆಯಾಗಿರೋ ದೇವತೆ..
ಅವಳೇ ನಮ್ಮ ಮಮತೆಯ ಮಾತೆ ..!!

Saturday, 2 June 2012

ಹೊಸ ವರ್ಷ : ಆತುರ-ಕಾತುರ


ಹಾತೊರೆಯುತಿವೆ ಮೈಮನ
ಹೊಸವರುಷದ ಆಗಮನಕೆ
ನವ ಚೈತನ್ಯ ನವ ಉಲ್ಲಾಸ
ನವಭಾವದ ಶುಭಹಾರಯಿಗೆ ;

ಅರಿವಿದ್ದರೂ ಮರೆತ್ಹೋಗಿದೆ
ಕಳೆದಿರುವ ಭವಮಾನದ 
ಆಯುರ್ಮಾನ, ಪರಿಮಾಣ;  
ಬಾಳಬಂಡಿಯ ಗಾಲಿ
ಸವೆದ್ಹೋಗಿರುವುದನ್ನ;
ಕಳೆದಿರುವ ಕ್ಷಣಗಳು
ಮತ್ತೆಬಾರದಿರುವುದನ್ನ;
ಅಳಿಸಲಾಗದ ಸಂಬಂಧ
ಜಗದಿಂದ ಮರೆಯಾಗಿರುವುದನ್ನ;

ಕಳೆದುದನ ಮತ್ತೆ ಮೆಲುಕೇಕೆ;
ಮುಂದೆ ಬರುವುದನ
ಬಯಸುವುದೇ ನವಜೀವನ
ಎಂಬುದಲ್ಲವೇ ಮನುಷ್ಯನ
ಹುಟ್ಟುಸಾವಿನ ಗುಣ
ನಡೆಯುವುದದೆ ಮುಂದೆ
ಯುವ ಭಾವನ; ನವ ಯವ್ವನ
ಜಗತ್ತಿನ ಚೇತನ...!!