Saturday 25 August 2012

ಬರಗಾಲದ ಬೇಗೆಯಲಿ

ಬರಗಾಲವೀಗ.. 
ಎನ್ನರಗಿಣಿಯ ಎದೆಗೂಡು 
ಬರಿದಾದ ಬಯಲು..!
ಒಲವ ನೀರನೆರಚಿ
ಅವಳ ಮನ ತಣ್ಣಗಿಡಲೆಂದು 
ಮೋಡವಾಗಿ ಬಾನನೇರಿದರೂ
ಮತ್ತೆ ಗುಡುಗುಗಳ ಅಬ್ಬರಕ್ಕೆ
ಬಲವಾದ ಗಾಳಿ ಬಂದು
ಮೋಡಗಳ ದಿಕ್ಕು ಬದಲಿಗೊಂಡು
ಸುರಿಯ ಬೇಕಿದ್ದ ಸೋನೆ 

ಸುರಿದು ತಂಪು ಮಾಡಲಿಲ್ಲ..!!
ಬರಗಾಲವೀಗ.. 
ಎನ್ನರಗಿಣಿಯ ಎದೆಗೂಡು 
ಬರಿದಾದ ಬಯಲು..!!
ಸುಡುನೆಲವ ಉತ್ತಿ 
ಪಡೆವೆ ಪ್ರೀತಿಯ ಫಸಲು
ಬಿಡದೆ ನಡೆವೆ ಅವಳೆಡೆಗೆಂದು 
ನಡುನಡುಗಿ ನಡೆದರೂ
ಬಿಡಲಿಲ್ಲ ಅವಳ ಗಮನ ನನ್ನ ಕಡೆ
ಕಡುಕೋಪ ಬಿಡುವೆಂದು 
ಕೊಡು ನೀ ನಿನ್ನೊಲುಮೆ 
ಪಡೆದಿಡುವೆ ಕಡೆತನಕ 
ಕಡು ಪ್ರೀತಿಯಿಂದ ಕೇಳಿದರೂ 
ಪಡೆಯಲಾಗಲಿಲ್ಲ ಕಡೆಗೂ ಅವಳ ಕೂರ್ಮೆ.
ಬರಗಾಲವೀಗ.. 
ಎನ್ನರಗಿಣಿಯ ಎದೆಗೂಡು 
ಬರಿದಾದ ಬಯಲು..!!
ಮರುಭೂಮಿಯಲ್ಲ ಅವಳ ಒಡಲು
ಕಾದಿರಬಹುದು ಕೆಲವು ದಿನಗಳವರೆಗೆ
ಕಾಯುವೆನು ಖಂಡಿತ ಆರುವ ತನಕ
ಬೆಂಬಿಡದೆ ಸಾಗುವೆ ಬಿಸಿಲು ಮರೆಯಾಗಿ 
ಸೋನೆ ಹನಿ ಎನ್ನ ಕೆನ್ನೆ ಸವರಿ
ಖುಷಿ ಕೊಡುವ ಕಾತರದಲ್ಲಿ; 
ಬರಗಾಲ ನೀಗಿ ಬೆಳೆ ಬೆಳೆದು
ಬೆರೆತು ಫಸಲು ಕೊಡುವ ತವಕ
ಬರಿದಾದ ಬಯಲು ಹಸುರಾಗುವ ತನಕ !!

No comments:

Post a Comment