ಇಂದು, ಕಣ್ಣಲ್ಲಿ ನೂರಾರು ಕನಸುಗಳನ್ನು ಹೊತ್ತು, ಕೆರೆ ನೀರು ಕುಡಿದು ಬದುಕುತ್ತಿದ್ದ ಒಬ್ಬ ಸಾಮಾನ್ಯ ಹಳ್ಳಿ ಹುಡುಗನಿಗೆ ಕಾವೇರಿ ನೀರು ಕುಡಿಯುವ ಭಾಗ್ಯ ದೊರೆತ ಸುದಿನ. ಪ್ರಕೃತಿಯ ಮಡಿಲಲ್ಲಿ ಹುಟ್ಟಿ ಗಿರಿ ನದಿ ತೊರೆಗಳ ನಡುವೆ ಓಡಾಡಿ ತನ್ನ PUC ವಿದ್ಯಾಭ್ಯಾಸ ಮುಗಿಸಿ ಹೊಟ್ಟೆ ಪಾಡಿಗಾಗಿ ಇನ್ನೇನು ದೇಶದ ಬಹು ಆಕರ್ಷಿತ ವಾಣಿಜ್ಯ ನಗರಿಗೆ ಹಾರಬೇಕು ಅನ್ನುವಂತ ಯೋಚನೆ ಮಾಡುತ್ತಿದ್ದ ಚಿಗುರು ಮೀಸೆಯ ಹುಡುಗನಿಗೆ ಕನ್ನಡಾಂಬೆ ಕೈ ಬೀಸಿ ರಾಜಧಾನಿಗೆ ಕರೆಸಿಕೊಂಡ ಸಂದರ್ಭ. ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಆಸೆ ಇದ್ದರೂ ಮಾಡಲು ಅನುಕೂಲತೆ ಇರದ ಕಾರಣ ವಿದ್ಯಾಭ್ಯಾಸ ಮೊಟಕುಗೊಳಿಸಿ ತನ್ನ ಮತ್ತು ತನ್ನನ್ನೇ ನಂಬಿದ ಮನೆಯವರ ನಿತ್ಯದ ಖರ್ಚಿಗೆ ಸಂಪಾದನೆಗೆ ತೊಡಗಿಸಿಕೊಳ್ಳಬೇಕು ಎನ್ನುವ ಯೋಚನೆ ಮಾಡುವಾಗ ದೊರೆತ ಅನಿರೀಕ್ಷಿತ ಅವಕಾಶವೇ ಬೆಂಗಳೂರಿಗೆ ಎಂಟ್ರಿ ಸಿಕ್ಕಿದ್ದು. ಈ ಅದೃಷ್ಟದ ವ್ಯಕ್ತಿ ಮತ್ತಾರು ಅಲ್ಲ, ನಾನೆ.
ಬೆಂಗಳೂರಿಗೆ ಬಂದು, ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಬದುಕಿನ ಎಲ್ಲಾ ಏರಿಳಿತಗಳನ್ನು ಎದುರಿಸಿ ಅನುಭವಿಸುತ್ತ ಇಂದಿಗೆ 20 ವರ್ಷ ಪೂರೈಸಿದ್ದೇನೆ. ಹಳ್ಳಿಯಿಂದ ಬಂದು ಎರಡು ದಶಕಗಳನ್ನು ರಾಜಧಾನಿಯಲ್ಲಿ ಕಳೆದಿದ್ದೇ ಇಂದಿನ ಖುಶಿಯ ಸಮಾಚಾರ. ಈ ನಡುವೆ ನಾಲ್ಕಾರು ಸಲ ಕಂಪನಿ ಬದಲಾಯಿಸಿ, ಸಂಸಾರಿಯಾಗಿ ಬದುಕಿನ ಹತ್ತಾರು ಮಜಲನ್ನು ಹತ್ತಿಳಿದು ಎಲ್ಲಾ ಅನುಭವ ಕಂಡಿದ್ದನ್ನು ಎಂದಿಗೂ ಮರೆಯಲಾಗದು. ಉದ್ಯೋಗದ ಜೊತೆಯಲ್ಲಿ ಹವ್ಯಾಸದ ಕಲೆ, ಸಾಹಿತ್ಯ, ಸಂಗೀತ ಮುಂತಾದವುಗಳಲ್ಲಿ ತೊಡಗಿಸಿಕೊಂಡು ನಿಮ್ಮಂತಹ ಅದೆಷ್ಟೋ ಮಿತ್ರವರ್ಗವನ್ನು ಸಂಪಾದಿಸಿದ್ದು ಇನ್ನೊಂದು ಮಹಾ ಸಾಧನೆ ಅನ್ನಬಹುದು.


ಇಷ್ಟೆಲ್ಲಾ ವಿಷಯಗಳನ್ನು ನಿಮ್ಮಮುಂದೆ ಹಂಚಿಕೊಳ್ಳಲು ಬಲವಾದ ಕಾರಣ ಏನಂದ್ರೆ, ನಾವು ಮಾನವರು ಮಾಡಿದ ಉಪಕಾರವನ್ನು ಮರೆತುಬಿಡುತ್ತೇವೆ. ಮುಂದೆ ಬೆಳೆದು ನಿಂತಾಗ ಬೆಳೆಸಿದವರನ್ನೆ ತೆಗಳುತ್ತೇವೆ. ಹಾಗಾಗಬಾರದು, ನಮಗೆ ಪ್ರೀತಿ ತೋರಿಸಿದವರನ್ನು ನಾವು ಎಂದೂ ಮರೆಯಬಾರದು. ಅವರ ಮನಸಿಗೆ ನೋವು ನೀಡದೆ ಸದಾ ಅವರ ಉಪಕಾರವನ್ನು ಸ್ಮರಿಸುತ್ತಾ ಸಾಧಿಸಿ ಬದುಕಿ ತೋರಿಸಬೇಕು. ಅವರನ್ನು ಗೌರವಿಸಿ ಅವರು ಹೆಮ್ಮೆಯಿಂದ ಹೇಳುಕೊಳ್ಳುವಂತಹ ಸಂಬಂಧ ಇಟ್ಟುಕೊಳ್ಳಬೇಕೆಂಬುದಷ್ಟೇ ನನ್ನ ಆಶಯ.
ನರೇಂದ್ರ ಕಬ್ಬಿನಾಲೆ
No comments:
Post a Comment