Sunday 26 February 2017

ಅರವತ್ತರ ಅನ್ಯೋನ್ಯತೆ

ಬಾಗಿಲಲಿ ಬಣ್ಣದ ಚಿತ್ತಾರ ಬಿಡಿಸುವ
ನನ್ನವಳಿಗೀಗ ಅರವತ್ತು ವರುಷ
ದಿನಾ ಪಾತ್ರೆ ತೊಳೆದು ಸವೆದ ಕೈಯಲ್ಲೂ
ಕಾಣುತ್ತಿದೆ ಹದಿನಾರರ ಹರುಷ

ಕಾವಲುಗಾರರಿಲ್ಲದ ಬಾಯೊಳಗೆ
ಮೂಡುವ ಮಂದಹಾಸಕೆ
ಮತ್ತು ಬರಿಸುವ ಶಕ್ತಿ ಇನ್ನೂ ಬತ್ತಿಲ್ಲ
ಸುಕ್ಕುಗಟ್ಟಿದ ಮೈಯಲ್ಲೂ
ನಳನಳಿಸುವ ಹೊಳಪು
ಕತ್ತು ಅಲುಗಾಡದೆ ನೋಡುವಂತಿದೆಯಲ್ಲ

ನಾನಂತು ಸುಖಿ, ಇಂತ ಸಖಿ ಸಿಕ್ಕಿರುವಾಗ
ಮಾಸದಿರುವ ಒಯ್ಯಾರಕೆ ಸೋತು
ಪಕ್ಕದವರ ಗೋಜಿಗೆ ಹೋದವನಲ್ಲ
ಹತ್ತಾರು ಹೆತ್ತರೂ ಅಬ್ಬಾ ಅದೆಂತ ಹೊಂದಾಣಿಕೆ
ಹಗಲಿರುಳೆನ್ನದೆ ಕಾಡಿದರೂ
ಬೇಡವೆಂದು ದೂರ ತಳ್ಳಿದ ದಿನವಿಲ್ಲ

ಇದಲ್ಲವೆ ಬಂಧ, ಎಲ್ಲದರಲ್ಲೂ ಬೆರೆತ ಸಂಬಂಧ
ನನಗಾಗಿ ಅವಳು ಅವಳೊಬ್ಬಳೇ ಅವಳು
ಮುನಿಸಿಲ್ಲದ ಮನಸಿಂದ ಕಲಿತೆ ಹಲವು ಅವಳಿಂದ
ಅವಳಿಗಾಗಿ ನಾನು ನನಗೊಬ್ಬಳೇ ಅವಳು...

No comments:

Post a Comment