Sunday 19 February 2017

ಪ್ರತಿ ಸನ್ನೆಗೂ ಅರ್ಥವಿದೆ
ಪ್ರತಿ ಸೊನ್ನೆಗೂ ಸ್ವಾರ್ಥವಿದೆ


ನಮಗೆಲ್ಲ ತಿಳಿದಿರುವಂತೆ ಪ್ರಪಂಚದಲ್ಲಿ ಮಾತಾಡುವ ಏಕೈಕ ಜೀವಿ ಮನುಷ್ಯ. ಮಿಕ್ಕಿದೆಲ್ಲಾ ಪ್ರಾಣಿ ಪಕ್ಷಿಗಳು ತಮ್ಮ ಮೂಕ ಸನ್ನೆಗಳಿಂದ ತಮ್ಮ ತಮ್ಮೊಳಗೆ ಮಾತಾಡಿಕೊಳ್ಳುತ್ತವೆ. ಅವುಗಳಿಗೆ ಮಾತ್ರ ಅವುಗಳ ಮೂಕ ಭಾಷೆ ಅರ್ಥವಾಗುವುದು. ವೈಜ್ಞಾನಿಕತೆ ಮುಂದುವರಿದಂತೆ ಪ್ರಾಣಿ ಭಾಷೆಗಳನ್ನು ಅರ್ಥ ಮಾಡಿಕೊಳ್ಳಲು ಮನುಷ್ಯ ಬೇಕಾದಷ್ಟು ಸಂಶೋಧನೆ ಮಾಡಿದ್ದಾನೆ. ಈಗಲೂ ಪ್ರಯತ್ನಗಳು ನಡೆಯುತ್ತಿರುತ್ತವೆ. ಆದರೆ ಇಲ್ಲಿವರೆಗೂ ಸರಿಯಾಗಿ ಅದರ ಫಲಿತಾಂಶ ಸಿಗಲಿಲ್ಲ. ಹಾಗಾಗಿ ಪ್ರಾಣಿಭಾಷೆ ಮೂಕಭಾಷೆಯಾಗಿ ಪ್ರಚಲಿತದಲ್ಲಿದೆ. 

ಅವುಗಳದ್ದೇ ಆದ ಮೂಕಸನ್ನೆಗಳಿಂದ ಮಾತಾಡಿಕೊಂಡು ತಮ್ಮ ತಮ್ಮ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ನಾನು ಸಾಕಿರುವ ಬೆಕ್ಕು,ನಾಯಿ, ದನ, ಕೋಳಿಗಳಲ್ಲಿ ನೋಡಿರುತ್ತೇವೆ. ಪ್ರಾಣಿಗಳ ಮಾತು ಇರಲಿ, ಮನುಷ್ಯ ಕೂಡ ಒಮ್ಮೊಮ್ಮೆ ಮೂಕ ಪ್ರಾಣಿಯಂತೆ ವರ್ತಿಸುವುದನ್ನು ನಾವು ನೋಡಿರುತ್ತೇವೆ. ಅತ್ಯಂತ ಭಾವುಕನಾದಾಗ, ಅತ್ಯಂತ ವೇದನೆಗಳಿಂದ ಕೂಡಿದಾಗ ಮಾತುಗಳೇ ಹೊರಡದಾಗ, ಮೂಕಭಾಷೆಯಲ್ಲಿ ತಮ್ಮ ನೋವನ್ನು ತೋರಿಕೊಳ್ಳುವುದು ಇದೆ. ಅಂದರೆ ಮನುಷ್ಯ ತನ್ನ ಉತ್ಕಟ ಪ್ರೀತಿ ಮತ್ತು ವೇದನೆಗಳನ್ನು ತೋರ್ಪಡಿಸುವುದು ಸನ್ನೆಯಿಂದಲೇ. ಅದರಂತೆ ಪ್ರತಿ ಸನ್ನೆಗೂ ಅದರದೇ ಆದ ಅರ್ಥವಿದೆ.

"ಕಣ್ಣ ಸನ್ನೆ" ಇದರ ಅರ್ಥ ಗೊತ್ತಿಲ್ಲದವರಾರು ಇರ್ಲಿಕ್ಕಿಲ್ಲ. ಪ್ರೀತಿ-ಪ್ರೇಮ ಶಬ್ದದ ಅರ್ಥ ಗೊತ್ತಿದ್ದವರು ಇದರ ಅರ್ಥ ನಿರರ್ಗಳವಾಗಿ ಪುಟಗಟ್ಟಲೆ ವಿವರಿಸಬಲ್ಲರು, ಯಾಕೆಂದರೆ ಇವೆರಡು ಒಂದೇ ಜಾತಿಗೆ ಸೇರಿದ ಪದಗಳು. ಕಣ್ಣ ಸನ್ನೆಗೆ ಇಡೀ ಜೀವ ಕುಲಕೋಟಿಯೇ ಸೋತಿದೆ. ಅದು ರಾಜಮಹಾರಾಜರು ಇರಬಹದು, ಋಷಿಮುನಿಗಳು ಇರಬಹುದು, ದೇವಾನುದೇವತೆಗಳು ಇರಬಹುದು. ಇದೊಂದು ಕುಲಕೋಟಿ ಜೀವಿಯ ಕಾಮದಾಟಿಯ ಸೃಷ್ಠಿಕೊಡುಗೆ. ಇದೆ ಪಂಗಡಕ್ಕೆ ಸೇರಿದ ತುಟಿ ಸನ್ನೆ, ಮೂಗು ಸನ್ನೆ, ಕೆನ್ನೆ-ಹುಬ್ಬು ಸನ್ನೆಗಳೂ ಇದೆ ಅರ್ಥ ಕೊಡುತ್ತವಾದರೂ, ಸಂದರ್ಭಕ್ಕೆ ಸಂಬಂಧ ಪಟ್ಟಂತೆ ವ್ಯತ್ಯಾಸವಾಗುತ್ತವೆ. 

ಅದರಂತೆ ಕೈಸನ್ನೆ, ಯಾರನ್ನಾದರೂ ಕರೆಯುದಿದ್ದರೆ, ಯಾರಿಗಾದರೂ ಹೋಗು ಎಂದು ಹೇಳುವುದಿದ್ದರೆ,ಯಾರಿಗಾದರೂ ಕೋಪದಿಂದ ಬೈಯುವುದಿದ್ದರೆ ಕೈಸನ್ನೆ ಮಾಡೇ ಮಾಡುತ್ತೇವೆ. ಕೈಸನ್ನೆ ಸಂಧರ್ಭಕ್ಕನುಗುಣವಾಗಿ ಉಪಯೋಗಿಸಲ್ಪಡುತ್ತದೆ. ಇದೊಂದು ಪರಿಣಾಮಕಾರಿಯಾದ ಸನ್ನೆ ವಿಧಾನ. ನಿತ್ಯ ಬದುಕಿನಲ್ಲಿ ಹೆಚ್ಚಿನ ಸಂದರ್ಭದಲ್ಲಿ ಉಪಯೋಗಿಸುವ ಬಹುಪಯುಕ್ತ ಸನ್ನೆ. ಮಿಕ್ಕುಳಿದ ಸನ್ನೆ ಅಂದರೆ, ಕಾಲು ಸನ್ನೆ(ಲವ್ ಆದಾಗ ನೆಲದಲ್ಲಿ ಕಾಲು ಕೆರೆಯುವುದು)ಹೊರಡು ಅಂತ ಕೋಪದಲ್ಲಿ ಹೇಳುವಾಗ ಕಾಲು ನೆಲಕ್ಕೆ ಕುಟ್ಟಿ ಗದರಿಸುವುದು, ಹೀಗೆ ಹಲವಾರು ಸನ್ನೆಯನ್ನು ಉಪಯೋಗಿಸುತ್ತೇವೆ. ಹೀಗೆ ನಾನು ಹೇಳಹೊರಟಿರುವ ಸನ್ನೆಗಳು ಅದರದೇ ಆದ ಅರ್ಥವನ್ನು ಹೊಂದಿವೆ. ಪ್ರತಿ ಸನ್ನೆಗೂ ಅರ್ಥವಿದೆ 

ಎರಡೆಯದು ಪ್ರತಿ ಸೊನ್ನೆಗೂ ಸ್ವಾರ್ಥವಿದೆ. ಹೌದು ಪ್ರತಿಯೊಂದು ಸೊನ್ನೆ ಅಂದರೆ zero ಗೂ ತಾನು ತನ್ನ ಬೆಲೆಯನ್ನು ಹೆಚ್ಚಿಸಿಕೊಳ್ಳಬೇಕು ಅನ್ನುವ ಸ್ವಾರ್ಥವಿದೆ. ಇದರಾರ್ಥ, ತಾನು ಎಲ್ಲಾ ವಿಷಯದಲ್ಲೂ ಸೊನ್ನೆಯಾದರೂ ಎಲ್ಲರಿಗಿಂತ ಮುಂದೆ ಇರಬೇಕು ಅನ್ನುವ ಕೇವಲ ಬುದ್ದಿ ಹೆಚ್ಚು ಇರುತ್ತದೆ. ಏನೂ ಸಾಧನೆ ಮಾಡದವನು ಸಾಧನೆ ಮಾಡಿದವನ ಮುಂದೆ ಕೊಚ್ಚಿಕೊಳ್ಳುವುದು, ಏನೂ ಓದಿಲ್ಲದವನೂ ಓದಿದವನ ಮುಂದೆ ತನಗೂ ಅಲ್ಪ ಸ್ವಲ್ಪ ಗೊತ್ತಿಗೆ ಅಂತ ಸಾಬೀತು ಪಡಿಸಲು ಒದ್ದಾಡುವುದು ಇವೆಲ್ಲವೂ ಸೊನ್ನೆಯ ಸ್ವಾರ್ಥಗಳು. ಇದಕ್ಕಿಂತ ಮುಖ್ಯವಾಗಿ ಸೊನ್ನೆಯ ಬೆಲೆ ಹೆಚ್ಚಿಸಿಕೊಳ್ಳುವುದು. ಅಂದರೆ ಸಂಖ್ಯೆಯ ಮುಂದೆ ಕೂತು ಸಾವಿರ, ಲಕ್ಷ, ಕೋಟಿಯಾಗಿ ಬೆಲೆ ಹೆಚ್ಚಿಸಿಕೊಳ್ಳುವುದು. ನೇರವಾಗಿ ಹೇಳಬೇಕಾದರೆ, ನಮ್ಮ ಕಣ್ಣೆದುರೇ ಇರುವಂತಹ ರಾಜಕೀಯ ನಾಯಕರ ಬದುಕಿನ ಶೈಲಿ. ಸಾಮಾನ್ಯ ವ್ಯಕ್ತಿಯಾಗಿದ್ದವನೊಬ್ಬ ಯಾವುದೊ ಮೋಸದ ಲಾಭದಾಯಕ ಕೆಲಸಕ್ಕೆ ಕೈ ಹಾಕಿ ನಾಲ್ಕು ಕಾಸು ಮಾಡಿ, ಗಲ್ಲಿ ರೌಡಿಗಳನ್ನು ಸೇರಿಸಿಕೊಂಡು ನಂತರ ಚುನಾವಣೆಯಲ್ಲಿ ನಿಂತು ದುಡ್ಡಿನ ಬಲದಿಂದ ಗೆದ್ದು ಸೊನ್ನೆಯಾಗಿದ್ದವನು ಒಂದು ರಾತ್ರಿ ಹಗಲು ಆಗುವಷ್ಟರಲ್ಲಿ ಕೋಟ್ಯಧಿಪತಿಯಾಗುವುದು "ಸೊನ್ನೆಯ ಸ್ವಾರ್ಥವಲ್ಲವೇ" 

ಮೇಲೆ ಕೊಟ್ಟಿರುವ ಎರಡು ವಾಕ್ಯಗಳಿಗೆ ಮನಮುಟ್ಟುವಂತ ವ್ಯಾಖ್ಯಾನ ನೀಡಿದ್ದೇನೆ ಅನ್ನುವ ನಂಬಿಕೆ ನನಗೆ. ಇದರಲ್ಲಿ ನನ್ನ ನಿಲುವು ತಪ್ಪಿದ್ದು, ನಿಮ್ಮ ನಿಲುವೇನಾದರೂ ಬೇರೆ ಇದ್ದರೆ ದಯವಿಟ್ಟು ಮುಕ್ತ ಮನಸಿನಿಂದ ಇಲ್ಲಿ ಹಂಚಿಕೊಳ್ಳಬೇಕಾಗಿ ನನ್ನ ವಿನಮ್ರ ವಿನಂತಿ. ಧನ್ಯವಾದಗಳು 

2 comments:

  1. very true... well explained Narendranaa. Looking forward for many more posts... keep writing. All the best

    ReplyDelete